ಪ್ರಗಾಥ (ಓಡ್) ಇದಕ್ಕೆ ಒಳ್ಳೆಯ ಉದಾಹರಣೆ. ಪದ್ಯದಲ್ಲಿ ಸಾಲುಗಳ ಸಂಖ್ಯೆ ಇಷ್ಟೇ ಇರಬೇಕು ಎಂಬ ಸಂಪ್ರದಾಯವನ್ನು ಮುರಿದಂತೆ, ಪ್ರತಿಸಾಲಿನ ಪ್ರಮಾಣ ಒಂದೇ ಆಗಿರಬೇಕೆಂಬ ಸಂಪ್ರದಾಯವನ್ನೂ ಇಲ್ಲಿ ಮುರಿಯಲಾಗಿದೆ. ನಾಲ್ಕೊ ಐದೊ ಆರೊ ಗಣಗಳುಳ್ಳ ಪಂಕ್ತಿಯನ್ನು ವ್ಯತ್ಯಾಸಕ್ಕೆ ಅವಕಾಶ ಕೊಡದೆ ತಿರುತಿರುಗಿ ಉಪಯೋಗಿಸುವುದೇ ಪ್ರಾಚೀನಕವಿಗಳ ವಾಡಿಕೆ. ನೀಳ ಕಾವ್ಯವೆಲ್ಲ ಅದೇ ರೀತಿ ರಚಿತವಾಗು ತ್ತಿತ್ತು. ಆದರೆ ಪ್ರಗಾಥದಲ್ಲಿ ಪಂಕ್ತಿಗಳು ಅಸಮವಾಗುತ್ತಿದ್ದುವು. ಹತ್ತೆಂಟು ಸಾಲುಗಳು ವೃತ್ತದ ಕೆಲವು ಸಾಲುಗಳು ವಿಭಿನ್ನವಾಗಿರುತ್ತಿದ್ದುವು. ವೃತ್ತಗಳ ರಚನೆಯಾದರೊ ಒಂದೇ ಮಾದರಿಯನ್ನು ಅನುಸರಿಸಬೇಕಾಗಿತ್ತು. ಸಾಲುಗಳು ಉದ್ದದಲ್ಲಿ ವ್ಯತ್ಯಸ್ತವಾಗಿದ್ದರೂ ಭಾವ ಅರ್ಥಗಳ ತೂಕದಲ್ಲೂ ಪ್ರಭಾವದಲ್ಲೂ ಹೆಚ್ಚು ಕಡಿಮೆ ಹತ್ತಿರ ಹತ್ತಿರ ಇರುತ್ತಿದ್ದುವು.

ಆಮೇಲೆ ಬಂದ ಕವಿಗಳಿಗೂ ಅಸಮಪಾದತ್ವ ಆವಶ್ಯಕವಾಯಿತು. ಆಧುನಿಕ ಕವಿತೆಯಲ್ಲಿ ಅದು ವಿಪುಲವಾಗಿದೆ. ಎಂದರೆ, ಮನಸ್ಸಿಗೆ ಬಂದಂತೆ ಅದನ್ನು ಬಳಸತಕ್ಕದ್ದಲ್ಲ; ಅರ್ಥ, ರಾಗ ಕಾವ್ಯೋದ್ದೇಶಗಳಿಗೆ ಅನುಗುಣವಾಗಿ ಇರತಕ್ಕದ್ದು.

ಸಂಸ್ಕೃತ ಮತ್ತು ಕನ್ನಡ ಸಾಹಿತ್ಯದಲ್ಲೂ ಈ ಮಾರ್ಪಾಟು ಕಾಲಕಾಲಕ್ಕೆ ಕಂಡುಬಂದಿದೆ. ಆಧುನಿಕ ಕಾವ್ಯಗಳಲ್ಲಂತೂ ಅಸಮವಾದ ರಚನೆ ವಿಪುಲವಾಗಿ ಕಂಡುಬಂದಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ